ಕಾರ್ಕಳ

 ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಒಂದು ಇತಿಹಾಸ ಪ್ರಸಿದ್ಧ ಪಟ್ಟಣ ಮತ್ತು ಅದೇ ಹೆಸರಿನ ತಾಲ್ಲೂಕಿನ ಕೇಂದ್ರ.  ಸಮುದ್ರ ಮಟ್ಟದಿಂದ 241' ಎತ್ತರದಲ್ಲಿದೆ. ತಾಲ್ಲೂಕಿನ ವಿಸ್ತಿರ್ಣ 515 ಚ. ಮೈ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಬೆಟ್ಟಗುಡ್ಡ ಪ್ರದೇಶದಲ್ಲಿ ಹಲರೀತಿಯ ಉತ್ತಮ ಕಟ್ಟಡಕಲ್ಲುಗಳು ಸಿಕ್ಕುತ್ತವೆ. ಚಪ್ಪಡಿಕಲ್ಲು, ಜಂಬುಕಲ್ಲು (ಲ್ಯಾಟರೈಟ್) ಇವು ಮುಖ್ಯವಾದವು. ಜಂಬುಕಲ್ಲು ಭೂಮಿಯಿಂದ ಅಗೆದು ತೆಗೆದಾಗ ಮೃದುವಾಗಿದ್ದು ಕ್ರಮೇಣ ಗಾಳಿಯಲ್ಲಿ ಗಟ್ಟಿಯಾಗುತ್ತದೆ. ಆದ್ದರಿಂದ ಆ ಕಲ್ಲಿನಲ್ಲಿ ಕೊಯ್ದು ತಯಾರಿಸಿದ ಇಟ್ಟಿಗೆಗಳನ್ನು ಈ ಪ್ರದೇಶದಲ್ಲೆಲ್ಲ ಕಟ್ಟಡಗಳಿಗೆ ಉಪಯೋಗಿಸುತ್ತಾರೆ. ಪಶ್ಚಿಮ ಘಟ್ಟಗಳನ್ನು ಆಗುಂಬೆ ಶ್ರೇಣಿಯ ಸ್ವಲ್ಪಭಾಗ ಕಾರ್ಕಳ ತಾಲ್ಲೂಕಿಗೆ ಸೇರುತ್ತದೆ. ಕಾರ್ಕಳದ ವಾಯುಗುಣ ಹಿತಕರವಾದುದು. ಜೂನ್ ಅಕ್ಟೋಬರ್ ವರೆಗೆ ಮಳೆಗಾಲ. ಅನೇಕ ಸಣ್ಣ ಹೊಳೆಗಳು ಇಲ್ಲಿ ಹರಿಯುತ್ತವೆ. ರಾಮಸಾಗರ ಇಲ್ಲಿಯ ಮುಖ್ಯ ಸರೋವರ. ಸುಮಾರು 700' ಎತ್ತರದಿಂದ ಬೀಳುವ ಭಂಡಾಜೆ ಜಲಪಾತ ಕಾರ್ಕಳ ತಾಲ್ಲೂಕಿನಲ್ಲಿದೆ. ಸಮೃದ್ಧವಾದ ಅರಣ್ಯಸಂಪತ್ತು ಮತ್ತು ಅರಣ್ಯಜನ್ಯ ಉತ್ಪನ್ನಗಳು ಕಾರ್ಕಳ ವೈಶಿಷ್ಟ್ಯ. ಈ ತಾಲ್ಲೂಕಿನ ಜನಸಂಖ್ಯೆ 2,05,598 (2001). ಪಟ್ಟಣದ ಜನಸಂಖ್ಯೆ 25,116 (2001).

 ಇಲ್ಲಿಯ ಪ್ರಮುಖ ಬೆಳೆ ಬತ್ತ. ಇದಲ್ಲದೆ ತೆಂಗು, ಅಡಿಕೆ, ಮೆಣಸು, ಶುಂಠಿ, ಅನಾನಸ್, ಹಲಸು, ಮಾವು, ಬಾಳೆ ಮತ್ತು ಗೇರುಬೀಜ ಇಲ್ಲಿಯ ಉತ್ಪನ್ನಗಳಲ್ಲಿ ಮುಖ್ಯವಾದವು. ಕಲ್ಲುಕೆಲಸ, ಬೀಡಿ ಕಟ್ಟುವುದು. ನಶ್ಯದ ತಯಾರಿಕೆ, ಕೊಬ್ಬರಿ ಎಣ್ಣೆ ತಯಾರಿಕೆ, ಹೆಂಚಿನ ತಯಾರಿಕೆ, ಮಡಕೆ ಕುಡಿಕೆ ಮತ್ತು ಬೆತ್ತದ ಕೆಲಸ ಮುಂತಾದ ಗ್ರಾಮಕೈಗಾರಿಕೆಗಳಿವೆ. ಸರ್ಕಾರಿ ವ್ಯವಸಾಯ ಸಂಶೋಧನ ಕೇಂದ್ರಗಳು ಕೆಲವುಂಟು. ಬೀಜೋತ್ಪಾದನ ಕೇಂದ್ರ (ಸಾಣೂರು), ಅನಾನಸ್ ಸಂಶೋಧನ ಕೇಂದ್ರ (ಮೂಡಬಿದ್ರೆ) ಮತ್ತು ವ್ಯವಸಾಯಭಿವೃದ್ಧಿ ಫಾರ್ಮಸಿ (ಕಾರ್ಕಳ) ಇವು ಮುಖ್ಯವಾದವು, ಕಾರ್ಕಳದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳೂ ಆಸ್ಪತ್ರೆಗಳೂ ಇವೆ. ಜೈನಕಾಶಿ ಎಂದು ಪ್ರಸಿದ್ಧವಾದ ಮೂಡಬಿದ್ರೆ ಈ ತಾಲ್ಲೂಕಿನಲ್ಲಿದೆ. ಸೋಮೇಶ್ವರ ಇನ್ನೊಂದು ಮುಖ್ಯ ಸ್ಥಳ. ಇಲ್ಲಿ ಜೈನಬಸದಿಯೊಂದುಂಟು. ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ದನದ ಜಾತ್ರೆ ಪ್ರಸಿದ್ಧ. ಯಕ್ಷಗಾನ ಮತ್ತು ಚಿತ್ರಕಲೆ ಇಲ್ಲಿಯ ಮುಖ್ಯ ಲಲಿತಕಲೆಗಳು. ಕಾರ್ಕಳ ಪಟ್ಟಣದಿಂದ ಉಡುಪಿ ಮೂಡಬಿದ್ರೆ, ಆಗುಂಬೆ ಮುಂತಾದ ಸ್ಥಳಗಳಿಗೆ ಬಸ್ ವ್ಯವಸ್ಥೆಯುಂಟು.

(ಎಸ್.ಎನ್)

 ಇತಿಹಾಸ : ಪಾಂಡ್ಯನಗರಿ ಎಂದು ಹೆಸರು ತಳೆದಿದ್ದ ಕಾರ್ಕಳದ ಉಲ್ಲೇಖವನ್ನುಳ್ಳ ಮೊಟ್ಟಮೊದಲಿನ ಶಾಸನ 1333ರದು. ಕಳಸ ರಾಜವಂಶದ ಭೈರರಸರ ಆಳ್ವಿಕೆಗೆ ಸೇರಿದ್ದ ಈ ಪಟ್ಟಣ ಬಹುಶಃ ಅವರ ರಾಜಧಾನಿಗಳಲ್ಲೊಂದು ಆಗಿದ್ದಿರಬೇಕು. ಭೈರರಸರು ಶಿವಮೊಗ್ಗ ಜಿಲ್ಲೆಯ ಹೊಂಬುಚದ ಸಾಂತರ ವಂಶದವರಾಗಿದ್ದರು. ಮೊದಲಯ ಹೊಯ್ಸಳರ, ಅನಂತರ ವಿಜಯನಗರದ ಅರಸರ ಅಧೀನರಾಗಿದ್ದರೂ ಇವುರ ಒಳಾಡಳಿತದಲ್ಲಿ ಸ್ವತಂತ್ರರಾಗಿದ್ದುದಾಗಿ ತಿಳಿದುಬರುತ್ತದೆ. 17ನೆಯ ಶತಮಾನದಲ್ಲಿ ಇವರ ಆಳ್ವಿಕೆ ಕೊನೆಗೊಂಡಿತು. ಭೈರರಸ ವಂಶದವರು ಜೈನಧರ್ಮಿಯರಾಗಿದ್ದುದರಿಂದ ಇಲ್ಲಿ ಅನೇಕ ಜೈನಬಸದಿಗಳೂ ಜೈನರ ಮಠವೂ ಇವೆ. ಅಲ್ಲದೆ ಕೆಲವು ಪ್ರಸಿದ್ಧ ಹಿಂದೂ ದೇವಾಲಯಗಳೂ ಈ ರಾಜರ ಆಶ್ರಯದಲ್ಲಿ ಸ್ಥಾಪಿತವಾದುವು. ಇಲ್ಲಿರುವ ಅನಂತಶಯನ ದೇವಾಲಯವನ್ನು ಭೈರರಸ ವಂಶದಲ್ಲಿ ಪ್ರಮುಖನಾದ ಇಮ್ಮಡಿ ಭೈರವ 1557 ರಲ್ಲಿ ಸ್ಥಾಪಿಸಿದುದಾಗಿ ಐತಿಹ್ಯವಿದ್ದರೂ ಅದರಲ್ಲಿರುವ ಪ್ರತಿಮೆಗಳು 12-13ನೆಯ ಶತಮಾನಗಳ ಕೃತಿಗಳಂತೆ ಕಂಡುಬರುತ್ತವೆ. ತ್ರಿಭುವನ ಜಿನ ಚೈತ್ಯಾಲಯವೆಂದು ಹೆಸರು ಪಡೆದಿದ್ದ ಮತ್ತು ಈಗ ಚತುರ್ಮುಖ ಬಸದಿಯೆಂದು ಕರೆಯುವ ಜೈನಮಂದಿರ ನಿರ್ಮಿತವಾದ್ದೂ ಈ ರಾಜನ ನೇತೃತ್ವದಲ್ಲೆ (1545). ಕಾರ್ಕಳದಲ್ಲಿರುವ 41 1/2' ಎತ್ತರದ ಗೊಮ್ಮಟೇಶ್ವರ ವಿಗ್ರಹವನ್ನು 1432 ರಲ್ಲಿ ವೀರಪಾಂಡ್ಯ ಸ್ಥಾಪಿಸಿದ. ಆ ಸಂದರ್ಭದಲ್ಲಿ ವಿಜಯನಗರದ ದೊರೆ ಇಮ್ಮಡಿ ದೇವರಾಯ ಇಲ್ಲಿಗೆ ಬಂದುದಾಗಿ ಹೇಳಲಾಗಿದೆ. ಇದೊಂದು ಏಕಶಿಲಾ ವಿಗ್ರಹ. ಶ್ರವಣಬೆಳಗೊಳದ ಗೊಮ್ಮಟ ವಿಗ್ರಹದಂತೆ ಇದೂ ಸುಂದರವಾಗಿದೆ. ಕಾರ್ಕಳದಲ್ಲಿರುವ ಮಾನಸ್ತಂಭಗಳು ಉತ್ತಮ ಕಲಾಕೃತಿಗಳು. ಚತುರ್ಮುಖ ಬಸದಿಯ ನಾಲ್ಕು ಮೂಲೆಗಳಲ್ಲಿ ಅರ-ಮಲ್ಲ-ಮುನಿಸುವ್ರತರ ಶಿಲಾಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ 15-16 ನೆಯ ಶತಮಾನದ ಆದಿಭಾಗದಲ್ಲಿ ಜೈನಧರ್ಮಕ್ಕೆ ಸೇರಿದ ಲಲಿತಕೀರ್ತಿ ಭಟಾರಕರ ಮಠ ಇಲ್ಲಿ ಸ್ಥಾಪಿತವಾಯಿತು. ಇಲ್ಲಿರುವ ಅನಂತಪದ್ಮನಾಭಮೂರ್ತಿ ದಕ್ಷಿಣಭಾರತದಲ್ಲೇ ವಿಶಿಷ್ಟವಾದ್ದು. ಇದರ ಎತ್ತರ 8'. ವಿಜಯನಗರದ ಕಾಲಕ್ಕೆ ಸೇರಿದ ಕಾಳಿಕಾಂಬಾ ದೇವಾಲಯ ಮತ್ತೊಂದು ಮುಖ್ಯ ಮಂದಿರ. ಇದರ ಮೂಲ ವಿಗ್ರಹ ಬಹಳ ಸುಂದರವಾಗಿದೆ.

 ಕಾರ್ಕಳದ ಭೈರರಸರು ಕಲಾಪ್ರೇಮಿಗಳೂ ಸಾಹಿತ್ಯೋಪಾಸಕರೂ ಆಗಿದ್ದರು. ಲಲಿತಕೀರ್ತಿ, ನಾಗಚಂದ್ರ, ಕಲ್ಯಾಣಕೀರ್ತಿ ಮುಂತಾದ ಸಂಸ್ಕøತಿ ಕವಿಗಳೂ ರತ್ನಾಕರವರ್ಣಿ. ಚದುರ ಚಂದ್ರಮ ಮೊದಲಾದ ಕನ್ನಡ ಕವಿಗಳೂ ಇವರ ಆಶ್ರಿತರಾಗಿದ್ದರು. ಮುದ್ದಣ ಕವಿ ಹುಟ್ಟಿದ ನಂದಳಿಗೆ ಗ್ರಾಮ ಇರುವುದು ಕಾರ್ಕಳ ತಾಲ್ಲೂಕಿನಲ್ಲಿ.

(ಬಿ.ಕೆ.ಜಿ.; ಕೆ.ಎಸ್.ಡಿ.; ಎಸ್.ಎಸ್.ಎ.)